ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ 
(1928- ). ಕೊಲಂಬಿಯಾದ ಅರಕಾಟಕಾದಲ್ಲಿ 6ನೇ ಮಾರ್ಚ್, 1928ರಲ್ಲಿ ಹುಟ್ಟಿದ ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ತಂದೆ ತಾಯಿಯರಿಗಿಂತ ಹೆಚ್ಚಾಗಿ ಹಿಂದೊಮ್ಮೆ ಯುದ್ಧದಲ್ಲಿ ಉದಾರವಾದಿಗಳ ಯೋಧನಾಗಿದ್ದ ಅಜ್ಜ ಮತ್ತು ಅಜ್ಜಿಯರ ಸಹವಾಸದಲ್ಲಿ ಬೆಳೆದ. 1946ರಲ್ಲಿ ಕಾನೂನು ಕಾಲೇಜಿಗೆ ಸೇರಿಕೊಂಡಿದ್ದರೂ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ. ಮುಂದೆ 1958ರಲ್ಲಿ ಮದುವೆಯಾಗಲಿದ್ದ 13ರ ಹುಡುಗಿಯನ್ನು ಆಗ ಮೆಚ್ಚಿಕೊಡಿದ್ದ. ಓದಿನಲ್ಲಿ ಮನಸ್ಸಿರದೆ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದರೂ ಕೊಲಂಬಿಯಾದಲ್ಲಿ ಜರುಗುತ್ತಿದ್ದ ರಾಜಕೀಯದ ಏರುಪೇರುಗಳಿಗೆ ತೆರೆದುಕೊಂಡು ಕೆಲವು ಕಾಲ ಸೋಷಲಿಸ್ಟರ ಸಂಗ ಹೊಂದಿದ್ದ. ಅವನು "ಎಲ್ ಸ್ಪೆಕ್ಟೇಟರ್" ಪತ್ರಿಕೆಗೆ ತನ್ನ ದೇಶಕ್ಕೆ ಸಂಬಂಧಿಸಿದ ಭಾರಿ ನೌಕಾಘಾತದ ಬಗ್ಗೆ ಬರೆದ ಲೇಖನಗಳು ಅವನಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು.  ಅವನು 1950ರಲ್ಲಿ ಕಾನೂನು ಅಭ್ಯಾಸವನ್ನು ಸಂಪೂರ್ಣವಾಗಿ ತ್ಯಜಿಸಿ ಬರವಣಿಗೆಯಲ್ಲಿ ತೊಡಗಿದ. ಅನಂತರ ಇಡೀ ಯೂರೋಪಿನಲ್ಲಿ ಅಲೆಮಾರಿಯಾಗಿ ದೇಶದಿಂದ ದೇಶಕ್ಕೆ ತಿರುಗಾಡಿದ. ವಿಲಿಯಂ ಫಾಕ್ನರ್ ಊರೊಂದನ್ನು ಕಲ್ಪಿಸಿಕೊಂಡಂತೆ "ಮಕಾಂದೋ"ವನ್ನು ಕಲ್ಪಸಿದ. ಕೊಲಂಬಿಯಾದ ಸ್ಥಳೀಯ ಭಾಷೆಗಳಲ್ಲಿ ಒಂದಾದ ಬಂಟು ಎಂಬ ಭಾಷೆಯಲ್ಲಿ "ಮಕಾಂದೋ" ಎಂದರೆ ಬಾಳೆ. ಉತ್ತರ ಕೊಲಂಬಿಯಾದ ಪ್ರಮುಖ ಬೆಳೆಯೂ ಬಾಳೆ ಆಗಿದ್ದು ಅವನ ಕಲ್ಪನೆಗೆ ಬೆಂಬಲವಾಗಿರಬೇಕೆಂದು ಊಹಿಸಲು ಕಾರಣವಿದೆ. ಅದನ್ನು 1955ರಲ್ಲಿ ಪ್ರಕಟವಾದ ತನ್ನ ಕಿರು ಕಾದಂಬರಿ "ಲೀಫ್ ಸ್ಟಾರ್ಮ್"ನಲ್ಲಿ ಮೊದಲು ಬಳಸಿದ. ಆ ಕೃತಿಯ ಮೇಲೆ ಫಾಕ್ನರ್‍ನ ಪ್ರಭಾವ ಗಾಢವಾಗಿದೆಯೆಂದು ಪರಿಗಣಿತವಾದದ್ದರಿಂದ ಆಗಲೇ ಕೆಲವು ಪುಸ್ತಕಗಳು ಪ್ರಕಟವಾಗಿದ್ದರೂ ಕಾಫ್ಕಾನ "ಮೆಟಮಾರ್ಫಸಿಸ್" ಓದಿದ ಮೇಲೆ ಅದು ಅವನಿಗೆ ಅವನ ಅಜ್ಜಿ ತನ್ನ ಅನುಭವಕ್ಕೆ ಸಿಕ್ಕ ಮತ್ತು ಕೇಳಿದ ಕಥೆಗಳನ್ನು ಹೇಳುತ್ತಿದ್ದ ರೀತಿಯಲ್ಲಿ ಇದ್ದಂತೆ ಕಂಡಿತು. ಅದರಿಂದ ಅವನಿಗೆ ಬರವಣಿಗೆಯಲ್ಲಿ ನೇರ ಕಥನದ ಮಾರ್ಗ ಮತ್ತು ಸಾಂಪ್ರದಾಯಿಕ ವಸ್ತು ಅನಿವಾರ್ಯವಿಲ್ಲವೆಂದು ಅರಿವಾಯಿತು. ಅಲ್ಲಿಯ ತನಕ ತಾನು ಬರೆದಿದ್ದರಲ್ಲಿ ಅಸಮಾಧಾನಗೊಂಡು ತನಗೆ ಸಹಜವಾದ ಮಾಂತ್ರಿಕ ವಾಸ್ತವತೆ ಎಂದು ಹೆಸರಿಸಲಾಗಿರುವ ಪರಿಕಲ್ಪನೆಯೊಂದಿಗೆ ಬರೆಯತೊಡಗಿದ. ಅಭಿವ್ಯಕ್ತಿಯ ಮಾರ್ಗಕ್ಕೆ ತನ್ನ ಅಜ್ಜಿ ಹೇಳುತ್ತಿದ್ದ ರೀತಿಯೇ ಅತ್ಯಂತ ಸಮರ್ಪಕವೆಂದು ಭಾವಿಸಿ ಹದಿನೆಂಟು ತಿಂಗಳ ಸಂಪೂರ್ಣ ಏಕಾಗ್ರತೆಯಿಂದ "ನೂರು ವರ್ಷದ ಏಕಾಂತ" [ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್] ಕಾದಂಬರಿಯನ್ನು ಬರೆದ. ಆ ಅವಧಿಯಲ್ಲಿ ಬಡತನದಲ್ಲಿದ್ದ ಅವನ ಸಂಸಾರದ ನಿರ್ವಹಣೆಗೆ ಮನೆಯಲ್ಲಿ ಇದ್ದದ್ದನ್ನೆಲ್ಲ ಮಾರಬೇಕಾಯಿತು. ಅವನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. 

ಹಸ್ತ ಪ್ರತಿಯಲ್ಲಿಯೇ ಲ್ಯಾಟಿನ್ ಅಮೆರಕದ ಪ್ರಖ್ಯಾತ ಬರಹಗಾರ ಕಾರ್ಲೋಸ್ ಫಿಂತಸ್‍ನ ಪ್ರಶಂಸೆಗೆ ಒಳಗಾದ "ನೂರು ವರ್ಷದ ಏಕಾಂತ" 1967ರಲ್ಲಿ ಪ್ರಕಟವಾಯಿತು. 1969ರಿಂದ 1982ರ ನೊಬೆಲ್ ಪ್ರಶಸ್ತಿಯೂ ಸೇರಿದಂತೆ ಅನೇಕ ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ ಮತ್ತು ಪ್ರಪಂಚದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. 

"ನೂರು ವರ್ಷದ ಏಕಾಂತ" ಬ್ಯುಂಡಿಯಾ ವಂಶದ ಮೂರು ತಲೆಮಾರುಗಳ ಕಥಾ ಹಂದರದಲ್ಲಿ ಮಾಂತ್ರಿಕ ವಾಸ್ತವತೆ ಎಂದು ಕರೆಯಲಾದ ಪರಿಕಲ್ಪನೆಯಲ್ಲಿ ನಿರೂಪಿತವಾದ ಮಾನವ ಸಂಸ್ಕøತಿಯ ದಾಖಲೆ ಎಂದು ವ್ಯಾಖ್ಯಾನಿಸಲಾಗಿದೆ. 19ನೇ ಶತಮಾನದಲ್ಲೇ ಸ್ವಾತಂತ್ರ್ಯ ಗಳಿಸಿದರೂ ರಾಜಕೀಯ ಏರಿಳಿತಕ್ಕೆ ಒಳಗಾದ ಕೊಲಂಬಿಯಾದ ಸ್ಥಿತಿಯ ಪ್ರತಿಫಲನ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ವಿವಿಧ ರಾಜಕೀಯ ಸಿದ್ಧಾಂತಗಳಿಗೆ ಒಪ್ಪುವ ಅಂಶಗಳು ಇದರಲ್ಲಿ ದೊರಕುತ್ತದೆ. ಇಡೀ ಕಾದಂಬರಿ "ಮಕಾಂದೋ"ವನ್ನು ಹುಟ್ಟು ಹಾಕುವ ಬ್ಯುಂಡಿಯಾ ಮನೆತನ ಊರಿನೊಂದಿಗೆ ಅಭಿವೃದ್ಧಿ ಹೊಂದಿ ಕ್ರಮೇಣ ಸಂಪೂರ್ಣವಾಗಿ ನಾಶವಾಗುವ ದುರಂತವನ್ನು ತೆರೆÀದಿಡುತ್ತದೆ. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಪಾತ್ರಗಳ ಮಾನಸಿಕ ನೆಲೆಯಲ್ಲಿ ಸ್ಥಿರಗೊಂಡಿರುವ ಮಾಂತ್ರಿಕ ಅಂಶಗಳನ್ನು ವಾಸ್ತವತೆಯೊಂದಿಗೆ ಹೊಂದಿಸಿ ಮಾನವನ ಮೂಲ ಪ್ರವೃತ್ತಿಗಳ ಅನಾವರಣವಾಗುತ್ತದೆ. ಇಡೀ ಕಾದಂಬರಿಯಲ್ಲಿ ಹಸಿವು, ಕಾಮ, ಪ್ರೇಮ, ಮಾತ್ಸರ್ಯ, ಸಾಹಸ ಇತ್ಯಾದಿಗಳ ಜೊತೆ ರಸವಾದ, ಸುಳ್ಳು, ಸೂಳೆಗಾರಿಕೆ, ಹಾದರ, ಅತೀಂದ್ರಿಯ ಶಕ್ತಿ, ಮೂಢನಂಬಿಕೆ, ದೆವ್ವಗಳು, ದಂತ ಕಥೆ ಮುಂತಾದವುಗಳೂ ಇವೆ.

ಪುರಾಣಗಳಲ್ಲಿ, ಮಹಾ ಕಾವ್ಯಗಳಲ್ಲಿ ಹಾಗೂ ಜಾನಪದ ಕಥೆಗಳಲ್ಲಿರುವ ಅದ್ಭುತ ರಮ್ಯದ ಬಳಕೆಯನ್ನು ಎಂದಿನಿಂದಲೂ ಸ್ವೀಕರಿಸಿರುವ ಭಾರತೀಯರಿಗೆ ಮಾಂತ್ರಿಕ ವಾಸ್ತವತೆಯನ್ನು ಅದರ ನಿಜವಾದ ನೆಲೆಯಲ್ಲಿ ಸ್ವೀಕರಿಸುವುದಲ್ಲದೆ, ಅರ್ಥೈಸಿಕೊಳ್ಳುವುದು ಮತ್ತು ಅಭಿವ್ಯಕ್ತಿಗೊಳಿಸುವುದು ಅವರ ಮನೋಭೂಮಿಕೆಗೆ ಸಹಜವಾದದ್ದು ಎಂದು ಭಾವಿಸಲಾಗಿದೆ.

 ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‍ನ ಹಸ್ತ ಪ್ರತಿಗೆ ಅಪಚಾರವಾಗದ ರೀತಿಯಲ್ಲಿ 1966ರಲ್ಲಿ ಪ್ರಕಟವಾದ "ಇನ್ ಇವಿಲ್ ಅವರ್" ಕೃತಿಯಲ್ಲಿ ಅವನ ದೇಶದಲ್ಲಿ ನಡೆದ ಕ್ರೌರ್ಯ ಮತ್ತು ಹಿಂಸೆಯ ತಾಂಡವ ನೃತ್ಯವನ್ನು ಚಿತ್ರಿಸಿದ್ದಾನೆ. ಆ ಕೃತಿಗೆ ಅವನಿಗೆ ಕೊಲಂಬಿಯಾದ ಸಾಹಿತ್ಯ ಪ್ರಶಸ್ತಿ ದೊರಕಿತು. ಅವನ ತಂದೆಯ ಪ್ರೇಮ ಪ್ರಕರಣವನ್ನು ಆಧರಿಸಿದ್ದೆಂದು ಪರಿಗಣಿತವಾಗಿರುವ "ಲವ್ ಇನ್ ದ ಟೈಮ್ ಆಫ್ ಕಾಲರ" ಎಂಬ ಕಾದಂಬರಿ 1983ರಲ್ಲಿ ಪ್ರಕಟವಾಗಿ ಹೆಚ್ಚಿನ ಮನ್ನಣೆ ಪಡೆಯಿತು. 1999ರಿಂದ ಕ್ಯಾನ್ಸರ್‍ಗೆ ಒಳಗಾಗಿರುವ ಮಾರ್ಕೆಜ್‍ನ ಇತರ ಪ್ರಮುಖ ಕೃತಿಗಳೆಂದರೆ "ಆಟಮ್ ಆಫ್" ದ ಪೇಟ್ರಿಯಾರ್ಕ್"[1975], 1996ರಲ್ಲಿ ಪ್ರಕಟವಾದ "ನ್ಯೂಸ್ ಆಫ್ ಕಿಡ್‍ನ್ಯಾಪಿಂಗ್", "ಲವ್ ಅಂಡ್ ಅದರ್ ಡೆಮನ್ಸ್ [1994] ಮತ್ತು ಕಥಾ ಸಂಕಲನಗಳಾದ "ಇನ್ನೊಸೆಂಟ್ ಎರಿಂಡಾ ಅಂಡ್ ಅದರ್ ಸ್ಟೋರೀಸ್" ಹಾಗೂ "ಸ್ಟ್ರೇಂಜ್ ಪಿಲಿಗ್ರಿಮ್ಸ್" [1992]. ಆತ್ಮ ಕಥನದ ಮೊದಲ ಭಾಗವಾದ " ಲಿವಿಂಗ್ ಟು ಟೆಲ್ ದ ಟೇಲ್" ಮತ್ತು ಎರಡನೆಯ ಭಾಗವಾದ "ಮೆಮೊರೀಸ್ ಆಫ್ ಮೈ ಮೆಲಾಂಖಲಿ ವೋರ್"್ಸ [2004] ಎಂಬ ಕೃತಿ ಪ್ರಕಟವಾಗಿದೆ. ಅವನು 1999ರಲ್ಲಿ ಕೊಲಂಬಿಯಾದ "ಕಾಂಬಿಯೋ" ಪತ್ರಿಕೆಯನ್ನು ಖರೀದಿಸಿ ಅದಕ್ಕೊಂದು ಹೊಸ ರೂಪ ಕೊಟ್ಟಿದ್ದಾನೆ.  
(ಟಿ.ಆರ್. ಅನಂತರಾಮು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ